ಪ್ರೈವೇಟ್ ಕಂಪನಿಯಲ್ಲಿ ದುಡಿಯುವ ಕಾರ್ಮಿಕರು ಸುರಕ್ಷಿತರೇ..

0
337
labour laws in india for private companies

ಪ್ರೈವೇಟ್ ಕಂಪನಿಯಲ್ಲಿ ದುಡಿಯುವ ಕಾರ್ಮಿಕರು ಸುರಕ್ಷಿತರೇ ?

ಮನುಷ್ಯನ ಜೀವನ ನಾಲ್ಕು ದಿವಸ ಇವತ್ತು ಬದುಕಿದರೆ ನಾಳೆ ಬದುಕುತ್ತೇವೆ ಇಲ್ಲವೋ ಗೊತ್ತಿಲ್ಲ, ಹಾಂಗಂತ ಕೈಕಟ್ಟಿ ಮನುಷ್ಯ ಕುಳಿತುಕೊಳ್ಳಲು ಸಾಧ್ಯವಿಲ್ಲ ಅವನು ಬದುಕಿಗಾಗಿ ಬವಣಿಸುತಿರಬೇಕು. ತನ್ನ ಭವಿಷ್ಯವನ್ನು ರೂಪಿಸಲು ಪ್ರಾಥಮಿಕ ಶಾಲೆಯಿಂದ ಹಿಡಿದು ಉದ್ಯೋಗ ಪಡೆಯುವವರೆಗೆ ಸಂಘರ್ಷ ಮಾಡುತ್ತಲೇ ಇರಬೇಕಾಗುತ್ತದೆ. ಅಂತೂ ಹೆತ್ತವರ ಆಧಾರದಿಂದ ಕಷ್ಟಪಟ್ಟು ಓದಿ ತಮ್ಮ ನೆಚ್ಚಿನ ಪದವಿಯನ್ನು ಪಡೆದ ಆಯ್ತು, ಇನ್ನು ನಮ್ಮ ಹೆತ್ತವರಿಗೆ ನಾವು ಆಧಾರವಾಗಿ ಅವರ ಆರೋಗ್ಯ ಕ್ಷೇಮಗಳನ್ನು ನೋಡಿಕೊಳ್ಳುತ್ತಾ,ಪಡೆದ ಪದವಿ ಎಂಬ ಪಿಲ್ಲರ್ ಮೇಲೆ ನಮ್ಮ ಕನಸಿನ ಅರಮನೆಯನ್ನು ಕಟ್ಟುವ ಯೋಜನೆ ಮಾಡಬೇಕಾಗುತ್ತದೆ.

ಈ ಅರಮನೆ ಎಂದರೆ ನಾಲ್ಕು ಗೋಡೆಗಳ ಗೋಪುರವಲ್ಲ,ಇಲ್ಲಿ ನಮ್ಮ ಹೆತ್ತವರು ಗಂಡ-ಹೆಂಡತಿ ಮಕ್ಕಳು ಅವರ ಪಾಲನೆ-ಪೋಷಣೆ ಅಗತ್ಯಗಳ ಪೂರೈಕೆ ಹಾಗೂ ಅವರ ಭವಿಷ್ಯದ ಸುರಕ್ಷೆ ಇಷ್ಟಕ್ಕೆ ಮುಗಿಯಲ್ಲ ಇದರ ಜೊತೆಗೆ ನಮ್ಮ ಕನಸು ಆಸೆಗಳು ಅಗತ್ಯಗಳು ಸೇರಿಕೊಂಡಿವೆ. ಇವುಗಳ ಬಗ್ಗೆ ಯೋಚಿಸುವರು ಅಥವಾ ಕಾರ್ಯರೂಪಕ್ಕೆ ತಂದವರು ಒಬ್ಬ ಜವಾಬ್ದಾರಿಯುತ ಪುರುಷ ಅಥವಾ ಮಹಿಳೆ ಎಂದು ಕರೆಯಬಹುದು. ಆದರೆ ಈ ಮೌಲ್ಯಯುತ ಜವಾಬ್ದಾರಿಯನ್ನು ನಿಭಾಯಿಸಲು ಮುಖ್ಯವಾಗಿ ಬೇಕಾದದ್ದು ಒಂದು ಒಳ್ಳೆಯ ಉದ್ಯೋಗ.

ಮುಂದೆ ಓದಿ : ಖಾಸಗಿ ಉದ್ಯೋಗಗಳನ್ನು ಕೆಟ್ಟದಾಗಿ ಪರಿಗಣಿಸಲಾಗಿದೆಯೇ? ಸಾಧಕ -ಬಾಧಕಗಳನ್ನು ತಿಳಿದುಕೊಳ್ಳಿ

ಉದ್ಯೋಗ ಅಂದ ತಕ್ಷಣ ಇಲ್ಲಿ ಮೂರು ವಿಂಗಡನೆಗಳಿವೆ :

1. ಸೇವಾ ಉದ್ಯೋಗ
2. ಸರಕಾರಿ ಉದ್ಯೋಗ
3. ಸ್ವ ಉದ್ಯೋಗ



ಸೇವೆ ಉದ್ಯೋಗ : ಖಾಸಗಿ ಉದ್ಯೋಗದಾತರ ಕೈಕೆಳಗೆ ದುಡಿಯುವುದಕ್ಕೆ ಸೇವೆ ಉದ್ಯೋಗ ಎನ್ನುತ್ತೇವೆ ಇಲ್ಲಿ ಉದ್ಯೋಗದಾತ ಕೊಟ್ಟಂತ ಸಂಬಳದಿಂದ ಮಾತ್ರ ನಮ್ಮ ಜೀವನ ಸಾಗುತ್ತದೆ. ಇತರ ಯಾವುದೇ ಭತ್ಯಗಳು, ಸೌಲಭ್ಯಗಳು ಇಲ್ಲದೆ ಕೇವಲ ಸಿಗುವ ಸಂಬಳದಿಂದ ನಮ್ಮ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳಬೇಕು. ಉದ್ಯೋಗದ ಸುರಕ್ಷೆ ಕಿಂಚತ್ತೂ ಇಲ್ಲ, ಹೆಚ್ಚಿನ ಸಂಬಳಕ್ಕೆ ಕೋರಿಕೆ ಸಲ್ಲಿಸಿದರೆ ಬೇಕಾದರೆ ಮಾಡು ಇಲ್ಲವೇ ಕೆಲಸ ಬಿಡು ಎಂಬ ಮಂತ್ರ ಕಾಯಂ ಆಗಿರುತ್ತದೆ. ಭವಿಷ್ಯ ಅಭದ್ರತೆಯಿಂದ ಕೂಡಿರುತ್ತದೆ

ಸ್ವ ಉದ್ಯೋಗ : ಇಲ್ಲಿ ನಮ್ಮ ಸ್ವಂತ ಆಲೋಚನೆ ಶ್ರಮ ನಿರ್ಧಾರಿತ ಗುರಿ ಹಾಗೂ ದೃಢತೆ, ಪ್ರಾಮಾಣಿಕತೆಯಿಂದ ಮಾಡಿದ ಸ್ವಂತ ಉದ್ಯೋಗ ನಿಮ್ಮ ನಿರಂತರ ಶ್ರಮದಿಂದ ಗಳಿಸುವ ಹಣ ಸಂಪಾದನೆ. ಇಲ್ಲಿ ನಿಮ್ಮ ಪ್ರಯತ್ನ, ಸಾಧನೆ, ಛಲದಿಂದ ನಿಮ್ಮ ಸ್ವಂತ ಲಾಭ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಮಾಡುವ ಉದ್ಯಮ ಪ್ರಾಮಾಣಿಕವಾಗಿದ್ದರೆ ಖಂಡಿತ ಭವಿಷ್ಯ ಭದ್ರವಾಗಿರುತ್ತದೆ, ಏಕೆಂದರೆ ಸ್ವ-ಉದ್ಯೋಗ ಮನುಷ್ಯನ ಆಲೋಚನೆಗೆ ತಕ್ಕಂತೆ ಭಿನ್ನ ಪ್ರಕಾರದ, ಇತರ ಸಹ ಉದ್ಯೋಗಗಳನ್ನು ಸೇರಿಸುತ್ತಾ ಮರದ ಕೊಂಬೆಗಳು ಬೆಳೆದುಕೊಂಡಂತೆ ಬೆಳೆಯುತ್ತಾ ಹೋಗುತ್ತದೆ. ಇದು ನಿಮ್ಮ ಕೌಶಲ್ಯತೆಗೆ ಅನುಗುಣವಾಗಿ ನಿಮ್ಮ ಭವಿಷ್ಯವನ್ನು ನಿರ್ಮಿಸುತ್ತದೆ.

ಸರಕಾರಿ ಉದ್ಯೋಗ : ಸರಕಾರಿ ಕೆಲಸ ದೇವರ ಕೆಲಸ ಎಂಬ ಮಾತು ಇದೆ. ಇದು ನಿಜವಾಗಿಯೂ ದೇವರಿಗೆ ಅರ್ಪಿಸುವ ನಾನಾರೀತಿಯ ಪೂಜೆಗಳು, ವಿಶೇಷ ಪೂಜೆಗಳು, ಹರಕೆಗಳು, ಜಾತ್ರೆಗಳ ತರನೇ ಇವೆ. ಸರಕಾರಿ ಕೆಲಸದಲ್ಲಿ ಸಿಗುವ ಅಧಿಕ ಸಂಬಳ (ವಿಶೇಷ ಪೂಜೆ) ತುಟ್ಟಿ ಭತ್ಯ, ಪ್ರಯಾಣ ಭತ್ಯೆ, ವಸತಿ ಬಾಡಿಗೆ ಭತ್ಯೆ, (ಹರಕೆಗಳು) ಬೋನಸ್ ಮತ್ತು ಲೋಪ ದೋಷ ಭತ್ಯೆಗಳು (ಜಾತ್ರೆ).

ಇಷ್ಟೆಲ್ಲಾ ಇರುವಾಗ ಇದು ನಿಜವಾಗಿಯೂ ದೇವರ ಕೆಲಸವಾಗಿ ಕಾಣುತ್ತದೆ. ಅದರ ಮೇಲೆ ಉದ್ಯೋಗದ ರಕ್ಷಣೆ ಭದ್ರವಾಗಿರುತ್ತದೆ ಆಮೇಲೆ ನಿವೃತ್ತಿಯ ನಂತರ ನಿವೃತ್ತಿ ಸಂಬಳದ ಭದ್ರತೆ. ಮನುಷ್ಯನ ಜೀವನ  ಸಾರ್ಥಕವಾಗುತ್ತದೆ.

ಈ ಮೂರು ವಿಂಗಡನೆ ಗಳಲ್ಲಿ ಉದ್ಯೋಗ ಸುರಕ್ಷತೆ ಸ್ವ-ಉದ್ಯೋಗ ಮತ್ತು ಸರಕಾರಿ ಕೆಲಸಕ್ಕೆ ಮಾತ್ರ ಇರುತ್ತದೆ. ಇದರಲ್ಲಿ ಸರಕಾರಿ ಉದ್ಯೋಗಕ್ಕೆ ಇನ್ನೂ ಹೆಚ್ಚಿನ ಸುರಕ್ಷತೆ ಇರುತ್ತದೆ. ಆದರೆ ಸೇವಾ ಉದ್ಯೋಗ ತ್ರಿಶಂಕು ಸ್ಥಿತಿಯಲ್ಲಿ ಅಭದ್ರತೆಯಿಂದ ಕೂಡಿರುತ್ತದೆ.

ಭಾರತದಲ್ಲಿ ಒಟ್ಟು ಸರಕಾರಿ ಕೆಲಸ ಮಾಡುವವರ ಸಂಖ್ಯೆ 25% ,ಸ್ವಉದ್ಯೋಗ ಮಾಡುವವರ ಸಂಖ್ಯೆ 15% ಆಗಿದ್ದರೆ ಸೇವಾ ಉದ್ಯೋಗ ಮಾಡುವವರ ಸಂಖ್ಯೆ 60%. ಅಂದರೆ 60% ಸೇವಾ ಉದ್ಯೋಗ ಮಾಡುವವರ ಭವಿಷ್ಯ ಅಭದ್ರತೆಯಿಂದ ಕೂಡಿದೆ.



ಸೇವಾ ಉದ್ಯೋಗದ ಅಭದ್ರತೆಯ ಕಾರಣವೇನು ?

1. ಬೆಳೆಯುತ್ತಿರುವ ಜನಸಂಖ್ಯೆ ಸ್ಪೋಟ

2. ಉದ್ಯೋಗ ಪಡೆಯುವಲ್ಲಿ ಸ್ಪರ್ಧೆಗಳು

3. ಖಾಸಗಿ ಕಂಪನಿಗಳು ಹಾಗೂ ಅದರ ಉದ್ಯೋಗ ಮಾಲೀಕರ ದುರ್ವ್ಯವಹಾರ

4. ಸರಕಾರದಿಂದ ಯಾವುದೇ ರಕ್ಷಣೆ ಅಥವಾ ವಿಶೇಷ ಕಾನೂನುಗಳು ಇಲ್ಲದೆ

5. ಲೇಬರ್ ಲಾ (labor law ) ಎಂಬ ಕಾನೂನು ಇದ್ದರೂ, ನಮ್ಮ ದೇಶದ ಮಹಾನ್ ಖಾಸಗಿ ಕಂಪನಿಗಳು ಉದ್ಯೋಗ ಮಾಲೀಕರು, ತಮ್ಮ ವಿಶೇಷ ಚಾರ್ಟರ್ಡ್ ಅಕೌಂಟೆಂಟ್ಗಳ ಸಹಾಯದಿಂದ, ಸೇವಾ ಉದ್ಯೋಗಗಳಿಗೆ ಕೊಡುವ ಇತರ ಭತ್ಯೆ ಕಡಿತಗೊಳಿಸಲು ಮತ್ತು ಅವರನ್ನು ಒಪ್ಪಂದ ಆಧಾರಿತ ಉದ್ಯೋಗಿ (contract-based employees) ಇಲ್ಲವೇ ಒಪ್ಪಂದದ ನಿಶ್ಚಿತಾರ್ಥ ಉದ್ಯೋಗಿ (contractual employees) ಇಲ್ಲವೇ ದಿನಗೂಲಿ ಕಾರ್ಮಿಕ Daily wages employee) ಗುಂಪುಗಳನ್ನಾಗಿ ಮಾಡಿ, ಪ್ರತಿಯೊಬ್ಬ ಉದ್ಯೋಗಿಯನ್ನು ಆಯಾ ಗುಂಪುಗಳಿಗೆ ಸೇರಿಸಿ ಮತ್ತು ಕಂಪನಿಯ ಮೂಲ ವಾಹಿನಿ ಹೆಸರಿನ ಅಕೌಂಟಿಗೆ ಅವರನ್ನು ಸೇರಿಸದೆ ಇತರ ಸಬ್ ಕಂಪನಿಗಳಿಗೆ ಅವರನ್ನು ಸೇರಿಸುತ್ತಾರೆ. ಕಂಪನಿಯ ಮೂಲ ವಾಹಿನಿಯ ಕಾನೂನು ಪ್ರಕಾರ ಸಿಗುವ ಭತ್ಯಗಳಿಂದ ವಂಚನೆ ಮಾಡುತ್ತಾರೆ.

“ಉದಾಹರಣೆಗಾಗಿ ಟೈಮ್ಸ್ ಆಫ್ ಇಂಡಿಯಾ ಒಂದು ಪ್ರಸಿದ್ಧ ಹಾಗೂ ದೊಡ್ಡ ಪ್ರಮಾಣದ ನ್ಯೂಸ್ ಪೇಪರ್ (ವೃತ್ತ ಪತ್ರಿಕೆ ) ಕಂಪನಿಯಾಗಿರುತ್ತದೆ. ಇದರ ಮೂಲ ವಾಹಿನಿಯ ಅಕೌಂಟ್ Bennett and Coleman Ltd. ಕಂಪನಿ, ಭಾರತೀಯ ಉದ್ಯಮ ಕಾನೂನು ಪ್ರಕಾರ ಪತ್ರಿಕೋದ್ಯಮ ವರ್ಗದಲ್ಲಿ ರಿಜಿಸ್ಟರ್ಡ್ ಆಗಿರುತ್ತದೆ. ಅಂದಮೇಲೆ ಈ ಕಂಪನಿಯಲ್ಲಿ ಕೆಲಸ ಮಾಡುವ ಸರ್ವ ಉದ್ಯೋಗಿಗಳಿಗೆ, ಭಾರತದ ಪತ್ರಿಕೋದ್ಯಮ ಲೇಬರ್ ಕಾನೂನು ಪ್ರಕಾರ ಅವರಿಗೆ wage board ಅನ್ವಯವಾಗುತ್ತದೆ. ಅದರ ಪ್ರಕಾರ ಉದ್ಯೋಗಿಗಳಿಗೆ ಉತ್ತಮ ಸಂಬಳ,ಇತರ ಭತ್ಯಗಳನ್ನು, ಇಂಕ್ರಿಮೆಂಟ್ ಬೋನಸ್ ಕೊಡಬೇಕಾಗುತ್ತದೆ.”

ಆದರೆ ನಮ್ಮ ಭಾರತದಲ್ಲಿ ಕೆಲವು ಸ್ವಾರ್ಥಿ ಖಾಸಗಿ ಕಂಪನಿಗಳು, ತಮ್ಮ ಹೊಟ್ಟೆಯನ್ನು ಹುಬ್ಬಿಸಿ ಕೊಳ್ಳಲು, ಕೆಲಸಕ್ಕೆ ಸೇರುವ ಉದ್ಯೋಗಳನ್ನು ಆ ಮೂಲ ವಾಹಿನಿಯ ಕಂಪನಿಯ ಖಾತೆಯ ಅಡಿಯಲ್ಲಿ ಸೇರಿಸದೆ, ಅವರನ್ನು ಅದರ ಉಪ ವಿಭಾಗ ಇಲ್ಲವೇ, ಸಿಸ್ಟರ್ ಕನ್ಸರ್ನ್ ಕಂಪನಿ ಮಾಡಿ ಅದಕ್ಕೆ ಸೇರಿಸಿ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಾರೆ.

ಉದಾಹರಣೆಗೆ Questpro consultancy ಇಲ್ಲವೇ moneypal staffing services ಹೀಗೆ ಹಲವಾರು ರೀತಿಯ ಕಂಪನಿಗಳನ್ನು ರಚಿಸಿ, ಉದ್ಯೋಗಗಳಿಗೆ ಅವರ ಸೌಲಭ್ಯದಿಂದ ವಂಚನೆ ಮಾಡುತ್ತಾರೆ. ಅದರಲ್ಲೂ ಬುದ್ಧಿವಂತಿಕೆ ಎಂದರೆ ನಿರ್ಮಿಸಿದ ಈ ಸಬ್ ಕಂಪನಿ ವಿಳಾಸಗಳು, ಮುಖ್ಯ ವಾಹಿನಿಯ ಕಂಪನಿ ವಿಳಾಸದ ಅಡಿಯಲ್ಲಿ ಬರೆದ ಯಾವುದೋ ಒಂದು ಜೋಪಡಿ ಮನೆಯ ಇಲ್ಲವೆ ಹಳ್ಳಿ ಮನೆಯ ವಿಳಾಸ ಹೊಂದಿರುತ್ತದೆ. ಇದರಿಂದಾಗಿ ಉದ್ಯೋಗ ಮಾಡುವ ಬಡಪಾಯಿ ಕೆಲಸಗಾರರು ಬ್ಯಾಂಕುಗಳಲ್ಲಿ ಸಾಲ ಪಡೆಯಲು ಮುಂದಾದರೆ ಬ್ಯಾಂಕಿನವರು ಉದ್ಯೋಗಿಯ ಸ್ಯಾಲರಿ ಸ್ಲಿಪ್ ವಿಳಾಸವನ್ನು ಪರಿಶೀಲಿಸಿ, ಇದು ಬೋಗಸ್ ಕಂಪನಿಯದು ತಿಳಿದು ಅವರಿಗೆ ಸಾಲ ಮಂಜೂರಿ ಮಾಡೋದಿಲ್ಲ. ಅಂತೂ ಸೇವಾ ಉದ್ಯೋಗಿಗಳು ಎಲ್ಲಾಕಡೆಯಿಂದ ಅಸುರಕ್ಷಿತರಾಗಿರುತ್ತಾರೆ, ಇವರ ಗೋಳನ್ನು ಕೇಳುವವರು ಯಾರು?

ಮುಂದೆ ಓದಿ : ಖಾಸಗಿ ಉದ್ಯೋಗಗಳನ್ನು ಕೆಟ್ಟದಾಗಿ ಪರಿಗಣಿಸಲಾಗಿದೆಯೇ? ಸಾಧಕ -ಬಾಧಕಗಳನ್ನು ತಿಳಿದುಕೊಳ್ಳಿ



ಕತ್ತೆತ್ತರ ಎಷ್ಟು ವರ್ಷ ದುಡಿದರು ಉದ್ಯೋಗದ ಭದ್ರತೆ ಇಲ್ಲ

ಇದಕ್ಕೆ ಒಂದು ನಿಜವಾದ ಘಟನೆ ಇತ್ತೀಚಿನ ಕರೋನ ಸಮಯದಲ್ಲಿ, ಖಾಸಗಿ ಕಂಪನಿಗಳು ಉದ್ಯೋಗಿಗಳ ಹೊಟ್ಟೆ ಮೇಲೆ ಬೆಂಕಿ ಬರೆ ಇಟ್ಟ ಸಾವಿರಾರು ಪ್ರಸಂಗಗಳಲ್ಲಿ ಒಂದನ್ನು ಇಲ್ಲಿ ಬರೆಯುತ್ತಿದ್ದೇನೆ.

ರಾಜು ಒಬ್ಬ ಮಧ್ಯಮ ವರ್ಗದಿಂದ ಕೂಡಿದ ಸಂಸಾರದಲ್ಲಿ ಬೆಳೆದು ಬಂದವ, ಇಂದಿನ ಯುಗದಲ್ಲಿ ಮಧ್ಯಮ ವರ್ಗದಿಂದ ಕೂಡಿರುವ ಜನರ ಜೀವನ ಸದಾ ಏರು ಇಳಿತಗಳಿಂದ ಕೂಡಿರುತ್ತದೆ ಹಾಗೆ ರಾಜುವೀನ ಹೆತ್ತವರ ದುಡಿಮೆ ವಿದ್ಯಾಭ್ಯಾಸಕ್ಕೆ ಸಾಕಾಗದೆ, ತನ್ನ ವಿದ್ಯಾಭ್ಯಾಸವನ್ನು ಪಿಯುಸಿಗೆ ಮುಗಿಸಿ ಒಂದು ಖಾಸಗೀ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.

ಖಾಸಗಿ ಕಂಪನಿಯು ಪ್ರತಿಷ್ಠಿತ ಕನ್ನಡ ದಿನಪತ್ರಿಕೆಯನ್ನು ಮುದ್ರಿಸುವ ಹಾಗೂ ಇತರ ಮುದ್ರಣಗಳನ್ನು ಮಾಡುವ ಉದ್ಯೋಗ ಸಂಸ್ಥೆಯಾಗಿತ್ತು, ರಾಜುವಿಗೆ ಕಂಪನಿಯಲ್ಲಿ ಸಿಕ್ಕಿದ ಕೆಲಸ ತನ್ನ ಅದೃಷ್ಟದ ಕೆಲಸ ಅಂತ ಪ್ರಾಮಾಣಿಕವಾಗಿ ತನ್ನ ಹಿರಿಯ ಉದ್ಯೋಗಿಗಳ ಜೊತೆ ಗೌರವದಿಂದ ಕೆಲಸ ಮಾಡುತ್ತಾ ಅದರಲ್ಲಿ ಮುಂದುವರಿದ ಸಿಗುವ ಸಂಬಳ ಮನೆ ಖರ್ಚು, ಸಾಲ ಅಂತ ಸಾಕಾಗದೆ, ಸಿಕ್ಕಿದ ಬಿಡುವಿನ ಸಮಯದಲ್ಲಿ ಪಾರ್ಟ್ ಟೈಮ್ ಕೆಲಸವನ್ನು ಮಾಡಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ ಇದರಿಂದಾಗಿ ಅವನಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಗಲಿಲ್ಲ, ಸಿಗುವ ಸಂಬಳ ಕಡಿಮೆಯಾದರೂ ವರ್ಷಕ್ಕೊಮ್ಮೆ ಏರಿಸುವ 500 ರೂಪಾಯಿ ಅವನಿಗೆ ದೊಡ್ಡದೆನಿಸುತಿತ್ತು.

ಖರ್ಚುಗಳ ಸಮತೋಲನ

ಸಿಕ್ಕಿದರಲ್ಲಿಯೇ ಸಂತೋಷವನ್ನು ಹುಡುಕಬೇಕು ಎಂಬ ಗಾದೆಯಂತೆ, ಅವನು ಆ ವೃತ್ತಪತ್ರಿಕೆ ಕಂಪನಿಯಲ್ಲಿ ಐದು ವರ್ಷ ಕಳೆದಂತೆ ಅವನ ಹೆತ್ತವರು ವಯಸ್ಸು ಏರುತಿತ್ತು, ಅದರಿಂದ ವಿವಾಹದ ಯೋಚನೆ ಮಾಡಬೇಕಾಯಿತು ತನ್ನ ಸಂಸಾರಕ್ಕೆ ನೇರವಾಗಲು ಜೀವನ ಸಂಗಾತಿಯನ್ನು ಹುಡುಕಿ ಮದುವೆಯಾದ. ಆದಮೇಲೆ ಅವನ ಜವಾಬ್ದಾರಿಯು ಹೆಚ್ಚಾಯಿತು, ಖರ್ಚುಗಳ ಸಮತೋಲನ ನಿಭಾಯಿಸಲು ಸಿಗುವ ಸಂಬಳದಿಂದ ಕಷ್ಟವಾಗುತ್ತಿತ್ತು. ಹಾಗಂತ ತನ್ನ ಹಿರಿಯ ಉದ್ಯೋಗಿ ರಿಪೋರ್ಟಿಂಗ್ ಮ್ಯಾನೇಜರಿಗೆ ಸಂಬಳ ಸ್ವಲ್ಪ ಹೆಚ್ಚು ಮಾಡಲು ಕೋರಿಕೆ ಕೊಟ್ಟರೆ, ಈ ವರ್ಷ ಆಗಲ್ಲ ಮುಂದಿನ ಸಲ ನೋಡುವಂತ ಆಶ್ವಾಸನೆ ಮಾತ್ರ ದೊರೆಯುತ್ತಿತ್ತು. ಕುದುರೆ ಮುಂದೆ ಓಡುವಾಗ ಅದರ ಮುಂದೆ ಕ್ಯಾರೆಟ್ ಕಟ್ಟಿಸಿ ಓಡಿಸಿದ ಹಾಗೆ ಕಂಪನಿಯ ಮ್ಯಾನೇಜ್ಮೆಂಟ್ ಮತ್ತು ಅವನ ರಿಪೋರ್ಟಿಂಗ್ ಮ್ಯಾನೇಜರ್ ಅವನಲ್ಲಿ ರಾತ್ರಿ-ಹಗಲು ಅಂತ ದುಡಿಸಿಕೊಳ್ಳುತ್ತಿದ್ದರು.

ನ್ಯಾಯಯುತ ಸಂಬಳ ಹಾಗೂ ಇನ್ನಿತರ ಭತ್ಯೆಗಳಿಂದ ವಂಚನೆ

ಈ ಖಾಸಗಿ ಕಂಪನಿಯು ( ಮೇಲೆ ವಿವರಿಸಿದ ಉದಾಹರಣೆ ಪ್ರಕಾರ ) ದಿನಪತ್ರಿಕೆ ಮುದ್ರಿಸುವ ಕಂಪನಿಯಾಗಿದ್ದು ಅಂದರೆ ಕಾನೂನು ಮತ್ತು ವೆಜ್ ಬೋರ್ಡ್ ಪ್ರಕಾರ ಇವರಿಗೆ ಉತ್ತಮ ಸಂಬಳ, ಇನ್ನಿತ್ತರ ಭತ್ಯೆಗಳನ್ನು ನೀಡಬೇಕಾಗಿತ್ತು. ಆದರೆ ನಾನು ಮೇಲೆ ವಿವರಿಸಿದ ಹಾಗೆ ಈ ಕಂಪನಿಗಳು ಉದ್ಯೋಗಿಗಳನ್ನು ಕಂಪನಿಯ ಮುಖ್ಯವಾಹಿನಿಯಲ್ಲಿ ಇಡದೆ, ಇತರ ಯಾವುದು staffing services, consultancy services, ಎಂಬ ಕಂಪನಿಯನ್ನು ರಚಿಸಿ ರಾಜುವಿಗೆ ಸಿಗಬೇಕಾದ ನ್ಯಾಯಯುತ ಸಂಬಳ ಹಾಗೂ ಇನ್ನಿತರ ಭತ್ಯೆಗಳಿಂದ ವಂಚನೆ ಮಾಡುತ್ತಿದ್ದರು.ಇದೆಲ್ಲ ರಾಜುವಿಗೆ ಗೊತ್ತಿದ್ದರೂ, ತನ್ನ ಕೆಲಸ ಮುಂದುವರಿಸಬೇಕಾಯಿತು. ಕಾರಣ ಬೇರೆ ಖಾಸಗಿ ಕಂಪನಿಗಳು ಮಾಡುವ ಹಣೆಬರಹ ಇದುವೇ ಅಂದಮೇಲೆ ಇಲ್ಲಿಯ ದುಡಿಯುದು ವಾಸಿ ಅಂತ ಸುಮ್ಮನೆ ಇದ್ದ. ಕಂಪನಿಗಳು ಮಾಡುವ ವಂಚನೆಗಳಿಗೆ ಹೋರಾಟ ಮಾಡಲು, ಹುಲಿಗಳ ಗುಂಪನ್ನು ಇಲಿಯು ಎದುರು ಹಾಕಿಕೊಂಡಂತೆ. ಇದ್ದುದರಲ್ಲಿಯೇ ನೆಮ್ಮದಿಯಿಂದ ಇರೋಣ ಅಂತ ಪ್ರಾಮಾಣಿಕವಾಗಿ ಅದೇ ಉದ್ಯೋಗದಲ್ಲಿ ಮುಂದುವರಿದ.

ಮುಂದೆ ಓದಿ : ಖಾಸಗಿ ಉದ್ಯೋಗಗಳನ್ನು ಕೆಟ್ಟದಾಗಿ ಪರಿಗಣಿಸಲಾಗಿದೆಯೇ? ಸಾಧಕ -ಬಾಧಕಗಳನ್ನು ತಿಳಿದುಕೊಳ್ಳಿ

ಇದೇ ಉದ್ಯೋಗ ಮಾಡುತ್ತಾ, ಸೇವಾ ಅವಧಿ ಹನ್ನೆರಡು ವರ್ಷ ಆದ್ದದ್ದು ಅವನಿಗೆ ತನ್ನ ಏಳು ವರ್ಷದ ಮಗಳನ್ನು ನೋಡಿದೆ ಮೇಲೇನೆ ಗೊತ್ತಾಯ್ತು. ಮನೆಯ ಬಾಡಿಗೆ, ಮಗಳ ಶಾಲೆಯ ಫೀಸ್, ಮನೆ ಖರ್ಚು, ಔಷಧಿ ಖರ್ಚು ಎಲ್ಲವನ್ನೂ ನಿಭಾಯಿಸಲು ಮಧ್ಯಮ ವರ್ಗದ ಜನರಿಗೆ ಸಾಲದ ಹೊರೆ ಯಾವಾಗಲೂ ಖಾಯಂ ಆಗಿರುತ್ತದೆ. ಹಾಗೆ ರಾಜುವಿಗೂ ಅದನ್ನು ಸಮತೋಲನದಲ್ಲಿಡಲು ಸಾಲದ ಹೊರೆಯನ್ನು ಎದುರಿಸಬೇಕಾಯಿತು. ಸಂಬಳ ಜೊತೆಗೆ ಬಿಡುವಿನ ಸಮಯದಲ್ಲಿ ಮಾಡುವ ಸಣ್ಣಪುಟ್ಟ ಕೆಲಸದಿಂದ ಕುಟುಂಬದ ತಕ್ಕಡಿ ಸರಿಹೋಗುತ್ತಿತ್ತು.



ಕರೋನ ಎಂಬ ಮಹಾಮಾರಿ ಕಲಿಸಿತು ಪಾಠ

ನಾವು ಸುಖದಲ್ಲಿ ಇರುವಾಗ, ನಮ್ಮಲ್ಲಿ ಬಂಧುಮಿತ್ರರು ಎಲ್ಲರೂ ಸೇರುತ್ತಾರೆ. ಅದೇ ನಾವು ಕಷ್ಟದಲ್ಲಿದ್ದಾಗ ಅದೇ ಮನುಷ್ಯರು ನಮ್ಮಿಂದ ದೂರ ಸರಿಯುತ್ತಾರೆ. ಹಾಗೆ ಕರೋನ ಎಂಬ ಮಹಾಮಾರಿ ಬಂದಾಗ ಪ್ರಪಂಚದ ಎಲ್ಲಾ ಮನುಷ್ಯರು ಇದನ್ನು ಅನುಭವಿಸಬೇಕಾಯಿತು. ಯಾರಿಗೆ ಯಾರುಂಟು ಎರವಿನ ಸಂಸಾರ ಎಂಬ ಪುರಂದರದಾಸರ ಪದ ನೆನಪಾಗುತ್ತದೆ. ಕರೋನ ಮಹಾಮಾರಿ ಬಂದಾಗ ಜನರಲ್ಲಿ ಕಳವಳ ಹೆದರಿಕೆ ಬರುವುದು ಸಹಜ. ತಮ್ಮ ಜೀವ, ಜೀವದ ಜೊತೆ ಸಂಸಾರದ ಸುರಕ್ಷತೆ ಇವೆಲ್ಲವೂ ಅವನಲ್ಲಿ ಕಾಡುವ ಒಂದು ದೊಡ್ಡ ಚಿಂತೆಯಾಗುತ್ತದೆ ಮತ್ತು ಈ ಚಿಂತೆ ಸಹಜವಾಗಿದೆ.

ಇಂಥ ಸಮಯದಲ್ಲಿ ಪ್ರತಿಯೊಬ್ಬ ಜನರು ಇನ್ನೊಬ್ಬರಿಗೆ ಸಹಾಯ ಮಾಡಿದ್ದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ. ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಆಧಾರವಾಗುವುದು ಅವನಲ್ಲಿಯ ಸದ್ಗುಣವನ್ನು ತೋರಿಸುತ್ತದೆ. ಬಾ ನಾನು ತಿನ್ನುವ ಆಹಾರದಲ್ಲಿ ಹಂಚಿಕೊಂಡು ತಿನ್ನುವ, ಮುಂದೆ ಬದುಕನ್ನು ಸಾಗಿಸುವ ಎಂಬ ಮಾತು ಒಬ್ಬ ಪ್ರಾಮಾಣಿಕ ಸದ್ಗುಣಉಳ್ಳ ಮನುಷ್ಯನಲ್ಲಿ ಕಾಣುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಜನರು ಇದನ್ನು ಮಾಡಿದ್ದಾರೆ ಹಾಗೆ ಹೆಚ್ಚಿನ ಜನ ಇದನ್ನು ಮಾಡದೆ ತಮ್ಮ ತಮ್ಮ ಗೂಡುಗಳನ್ನು ಮಾತ್ರ ಭದ್ರವಾಗಿ ಇಡಲು ಬೇರೆಯವರನ್ನು ಹೊರಗೆ ದುಡಿದ್ದಾರೆ. ಮನುಷ್ಯ ತನ್ನ ಮನುಷ್ಯ ಗುಣಗಳನ್ನು ಕಳೆದುಕೊಂಡಾಗ ಅವನು ರಾಕ್ಷಸ ಪ್ರವೃತ್ತಿ ಉಳ್ಳವನಾಗುತ್ತಾನೆ.

ಸಹಾಯಹಸ್ತ

ಹಾಗೆ ಕರೋನ ಮಹಾಮಾರಿ ಸಮಯದಲ್ಲಿ ಕೆಲವು ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ತಮ್ಮಲ್ಲಿ ಕೈಯಲ್ಲಿ ಆದಷ್ಟು ಅರ್ಧ ಸಂಬಳವನ್ನು ವರ್ಷಪೂರ್ತಿ ಕೊಟ್ಟು ಅವರನ್ನು ಕೆಲಸದಿಂದ ತೆಗೆಯದೆ, ಅವರನ್ನು ಅವರ ಸಂಸಾರವನ್ನು ರಕ್ಷಿಸಿದ್ದಾರೆ. ಕೆಲವು ಕಂಪನಿಗಳು ಮುಚ್ಚುವ ಪರಿಸ್ಥಿತಿ ಇದ್ದರೂ ಯಾವುದೇ ಕೆಲಸಗಾರರನ್ನು ತೆಗೆಯದೆ, ಅವರಿಗೆ ಅವರ ಕುಟುಂಬಕ್ಕೆ ತಿಂಗಳ ಊಟಕ್ಕೆ ಆಗುವಷ್ಟು ಐದು ಹತ್ತು ಸಾವಿರ ರೂಪಾಯಿ ಕೊಟ್ಟು ತಮ್ಮ ಉದ್ಯೋಗಿಗಳನ್ನು ಉಳಿಸಿಕೊಂಡಿದ್ದಾರೆ. ಯಾರಿಗೂ ಹೆಚ್ಚು ಕಡಿಮೆಯಂತೆ ಹಂಚದೆ ಎಲ್ಲರಿಗೂ ಒಂದೇ ಸಮಾನವಾಗಿ ಸಹಾಯಹಸ್ತವನ್ನು ನೀಡಿದ್ದಾರೆ.

ಆದರೆ ಕೆಲವು ಖಾಸಗಿ ಕಂಪನಿಗಳು ದುಡಿಯುವ ಬಡ ಉದ್ಯೋಗಿಗಳಿಗೆ ಕೇವಲ ಒಂದು ಅಥವಾ ಎರಡು ತಿಂಗಳು ಮಾತ್ರ ಅರ್ಧ ಸಂಬಳವನ್ನು ನೀಡಿ, ಆಮೇಲೆ ತಮ್ಮ ಬೊಕ್ಕಸಕ್ಕೆ ಅಥವಾ ತಾವು ಖರ್ಚು ಮಾಡುವ ದುಬಾರಿ ಖರ್ಚುಗಳಿಗೆ ಎಲ್ಲಿ ಕಡಿಮೇಯಾಗುತ್ತದೆಯೋ… ಎಂಬ ದುರಾಲೋಚನೆಯಿಂದ, ತಿಂಗಳಿಗೆ ಕೊಡುವ ಉದ್ಯೋಗಿಯ ಅರ್ಥ ಸಂಬಳವನ್ನು ಬಿಟ್ಟು, ಅವರ ತಿಂಗಳ ಊಟದ ಖರ್ಚುಗಳ ಐದು, ಹತ್ತು ಸಾವಿರ ರೂಪಾಯಿ ಕೊಡದೆ, ನೇರವಾಗಿ ಕೆಲಸವನ್ನು ಬಿಡಿ ಎಂಬ ರಾವಣನ ಆಜ್ಞೆಯಂತೆ, ತನ್ನ ಅತಿ ಅಗತ್ಯ ಬೀಳುವ ಸೀನಿಯರ್ ಅಧಿಕಾರಿಗಳನ್ನು ಇಟ್ಟುಕೊಂಡು, ಉಳಿದ ಎಲ್ಲಾ ಉದ್ಯೋಗಿಗಳನ್ನು ಮತ್ತು ಅವರ ಕುಟುಂಬದವರ ಹೊಟ್ಟೆಗೆ ಬಿಸಿ ಚಾಟಿ ಹಾಕಿದ್ದಾರೆ. ಕೆಲಸದಿಂದ ತೆಗೆಯುವಾಗ ಅವನ ವಯಸ್ಸು, ಸೇವೆ ಸಲ್ಲಿಸಿದ ವರ್ಷಗಳು ಅವನ ಕುಟುಂಬದ ಪರಿಸ್ಥಿತಿ ಯಾವುದನ್ನೂ ಲೆಕ್ಕಿಸದೆ ನಡು ರಸ್ತೆಗೆ ದೂಡಿದ್ದಾರೆ.

ಜೀವನ ಸಾರ್ಥಕವಾಗುತಿತ್ತು

ಒಬ್ಬ ಉದ್ಯೋಗಿ ತಾನು ಸೇವೆ ಸಲ್ಲಿಸುವ ಕಂಪನಿಗೆ ರಾತ್ರಿ ಹಗಲು ಎನ್ನದೆ, ಮಳೆ ಬಿಸಿಲು ಎನ್ನದೆ, ಅದರ ಪ್ರಗತಿಗೆ ಹೆಗಲಿಗೆ ಹೆಗಲು ಕೊಟ್ಟು ಜೀವನದ ಉದ್ದಕ್ಕೂ ದುಡಿದು ಕೊನೆಗೆ ಕಷ್ಟದ ಪರಿಸ್ಥಿತಿಯ ಬಂದಾಗ, ಕಂಪನಿಯ ಮಾಲೀಕರು ಹೊರಗೆ ದೂಡಿದ್ದಾರೆ. ಇಂಥ ಕಂಪನಿಯ ಮಾಲೀಕರು ಅವರ ಸೀನಿಯರ್ ಪ್ರಬಂಧಕರು ತಮ್ಮ ಖರ್ಚು ಮಾಡುವ ದುಬಾರಿ ತನಕ್ಕೆ, ಸ್ವಲ್ಪಕಾಲ ಬದಲಾಗುವ ತನಕ ಕಡಿತ ಹಾಕಿ ತನ್ನ ಎಲ್ಲಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯದೆ,ತಿಂಗಳ ಊಟ ಬಟ್ಟೆಗೆ ಯಾಗುವಷ್ಟು ಉದ್ಯೋಗಿಗಳಿಗೆ ನೀಡಿದ್ದರೆ, ಜೀವನ ಸಾರ್ಥಕವಾಗುತಿತ್ತು. ಉದ್ಯೋಗಿ ಮತ್ತು ಅವರ ಕುಟುಂಬದ ಸದಸ್ಯರ ದೊಡ್ಡ ಆಶೀರ್ವಾದವೇ ಸಿಗುತ್ತಿತ್ತು. ಆದರೆ ಇಂತಹ ಕಂಪನಿಗಳು ತಮ್ಮಲ್ಲಿ ಮನುಷ್ಯ ಗುಣಗಳನ್ನು ಕಳೆದುಕೊಂಡು ರಾಕ್ಷಸ ಪ್ರವೃತ್ತಿ ಗುಣಗಳನ್ನು ಹೊಂದಿರುವಾಗ ಅದು ಹೇಗೆ ಸಾಧ್ಯ?.



ಕೈಚಾಚುವ ಪರಿಸ್ಥಿತಿ

ಇದೇ ರೀತಿ ರಾಜುವಿನ ಅವನ ಖಾಸಗಿ ಕಂಪನಿ ಅವನ ಜೊತೆ ಮಾಡಿದ್ದು. ಒಂದು ಕಡೆ ಕರೋನದ ಹೆದರಿಕೆ, ಇನ್ನೊಂದು ಕಡೆ ನಂಬಿಕೊಂಡು ಬಂದಂತಹ ಉದ್ಯೋಗ ಕಳೆದುಕೊಂಡ ನೋವು. ಸಾಲದ ಹೊರೆ, ದಿನದ ಊಟಕ್ಕೂ ಹಣವಿಲ್ಲದೆ ಬೇರೆಯವರಲ್ಲಿ ಕೈಚಾಚುವ ಪರಿಸ್ಥಿತಿ, ತನ್ನ ಮುದಿ ತಂದೆ ತಾಯಿ ಹಾಗೂ ತನ್ನ ಪ್ರೀತಿಯ ಮಡದಿ, ಮಗಳು ಉಪವಾಸದಲ್ಲಿ ಇರುವಾಗ ರಾಜುವಿನ ಪರಿಸ್ಥಿತಿ ನೀವು ನಿಮ್ಮಲ್ಲಿ ಒಮ್ಮೆ ಇಟ್ಟು ನೋಡಿ ಹೇಗೆ ಅನುಭವಿಸಬಹುದು. ಬೇರೆ ಕೆಲಸಕ್ಕೆ ಸೇರಲು ಕರೋನ ಸಮಯ, ಎಲ್ಲಾ ವ್ಯವಹಾರ ಉದ್ಯೋಗಗಳು ಮುಚ್ಚಲ್ಪಟ್ಟಿದೆ, ಹೊಸ ಉದ್ಯೋಗಗಳಿಗೆ ಕರೆ ಇಲ್ಲ, ಇದ್ದರು ಕರೋನ ನಿಯಮ ಪ್ರಕಾರ ಮನೆ ಹೊರಗೆ ಹೋಗುವಂತಿಲ್ಲ. ಕಂಪನಿಯಿಂದ ಸಿಕ್ಕಿದ ಪಿಎಫ್, ಗ್ರಾಚ್ಯುಟಿ ಬ್ಯಾಂಕಿನ ಸಾಲ ಕೊಟ್ಟವರು ಬಾಚಿಕೊಂಡರು. ಕೈಯಲ್ಲಿ ಬಿಡಿ ಖಾಸು ಉಳಿಯಲಿಲ್ಲ. ಸಂಬಂಧಿಕರು ಗೆಳೆಯರು ದೂರ ಸರಿದರು. ಹೊಟ್ಟೆಗೆ ಸರಿಯಾದ ಆಹಾರವಿಲ್ಲದೆ ಕುಟುಂಬದ ಆರೋಗ್ಯ ಸ್ಥಿತಿ ಹದಗೆಟ್ಟಿತು. ಎರಡು ಮುದಿ ಜೀವಗಳು ಆಸ್ಪತ್ರೆ ಸೇರಬೇಕಾದ ಪ್ರಸಂಗ ಬಂತು ಆಸ್ಪತ್ರೆಯಲ್ಲಿ ಕರೋನ ಇಲ್ಲದಿದ್ದರೂ, ಕರೋನ ಅಂತ ಅವರಿಗೆ ಸ್ಟ್ಯಾಂಪ್ ಒತ್ತಿ ಕೊನೆಗೆ ಸರಿಯಾದ ಚಿಕಿತ್ಸೆ ಹಣವಿಲ್ಲದೆ ಎರಡು ಮುದಿ ಜೀವಗಳು ಪ್ರಾಣಕಳೆದುಕೊಂಡರು. ಪ್ರೀತಿಯ ಮಡದಿ ಹಾಗು ಮಗಳ ಆರೋಗ್ಯ ದಿನ ದಿನ ಕ್ಷಿಣಿಸುತಿತ್ತು.

ಮುಂದೆ ಓದಿ : ಖಾಸಗಿ ಉದ್ಯೋಗಗಳನ್ನು ಕೆಟ್ಟದಾಗಿ ಪರಿಗಣಿಸಲಾಗಿದೆಯೇ? ಸಾಧಕ -ಬಾಧಕಗಳನ್ನು ತಿಳಿದುಕೊಳ್ಳಿ

ಮಗಳ ಶಾಲೆಯ ಪಿಸು ಕಟ್ಟಲಾಗದೆ, ಆನ್ಲೈನ್ ತರಗತಿಯ ಬಾಗಿಲನ್ನು ಶಾಲೆಯವರು ಮುಚ್ಚಿಸಿದರು. ಮೊದಲು ಬಾಕಿ ಇರುವ ಪಿಸು ಕಟ್ಟಿ ಆಮೇಲೆ ಆನ್ಲೈನ್ ಗೆ ಕೂರಿಸಿ ಅಂತ ಶಾಲೆಯ ಚೀಮಾರಿ ಬೇರೆ. ಇಂತಹ ಪರಿಸ್ಥಿತಿಯನ್ನು ರಾಜು ನೋಡಿ ಕುಗ್ಗಿ ಹೋಗಿದ್ದರು. ನಂಬಿಕೊಂಡು ಹದಿನೈದು ವರ್ಷ, ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಯಾವ ಕೆಲಸದ ಭದ್ರತೆ ಇಲ್ಲ. ಇದು ಒಬ್ಬ ರಾಜುವಿನ ಕಥೆ ಅಲ್ಲ ಇಂತಹ ಹಲವಾರು ರಾಜು ಅಂತವರು ಇದ್ದಾರೆ. ಅವರೆಲ್ಲರ ಪರಿಸ್ಥಿತಿಯನ್ನು ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮಾಡುವ ದುರ್ವ್ಯವಹಾರ ನಿಲ್ಲಿಸಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಾ. ಹಂಚಿಕೊಂಡು ತಿನ್ನುವ ಎಂಬ ಸದ್ಗುಣಗಳನ್ನು ಹೊಂದಿದ್ದರೆ, ರಾಜುವಿನ ಉದ್ಯೋಗ ಹೋಗುತ್ತಿರಲಿಲ್ಲ ಅವನ ಹೆತ್ತವರು ಸಾಯುತ್ತಿರಲಿಲ್ಲ, ಮಡದಿ ಮಕ್ಕಳು ಉಪವಾಸ ಬೀಳುತ್ತಿರಲಿಲ್ಲ.

ಉದ್ಯೋಗ ಸುರಕ್ಷತೆಯನ್ನು ನೀಡಲು ಈ ಹೋರಾಟ

ಇಂದು ಮಹಾಮಾರಿಯ ಪ್ರಮಾಣ, ವ್ಯಾಕ್ಸಿನೇಷನ್ನಿಂದ ಕಡಿಮೆಯಾಗುತ್ತಿದೆ ನಿಜ, ಆದರೆ ರಾಜುವಿನಂತವರ ಬದುಕು ಪುನಃ ಸ್ಥಾಪನೆಯಾಗಲು ಯಾವುದೇ ಗ್ಯಾರಂಟಿ ಇಲ್ಲ. ಒಂದು ವೇಳೆ ಬದುಕು ಸ್ಥಾಪನೆಯಾದರೂ ಕಳೆದುಕೊಂಡ ಕುಟುಂಬ ಸದಸ್ಯರನ್ನು ಹಿಂತುರುಗಿ ಪಡೆಯಲು ಸಾಧ್ಯವಿಲ್ಲ. ಒದ್ದಾಡಿದ ಬದುಕಿನ ಹೋರಾಟವನ್ನು ಮರೆಯುವಂತಿಲ್ಲ. ನಮ್ಮ ಸರಕಾರಗಳು ಇಂತಹ ಖಾಸಗಿ ಕಂಪನಿಗಳಲ್ಲಿ ಸೇವೆಸಲ್ಲಿಸುತ್ತಿರುವ ಉದ್ಯೋಗಿಗಳಿಗೆ, ಉದ್ಯೋಗ ಭದ್ರತೆಯನ್ನು ನೀಡುವ ಹೊಸ ಕಾನೂನುಗಳನ್ನು ರಚಿಸಬೇಕು ಪ್ರತಿಯೊಬ್ಬರಿಗೂ ಸರಕಾರಿ ಕೆಲಸ ಹಾಗೂ ವ್ಯಾಪಾರ ಉದ್ದಿಮೆಯನ್ನು ಮಾಡಲು ಸಾಧ್ಯವಿಲ್ಲ, ಆದರೆ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ನೀಡುವ ಸಂಬಳ ಇತರ ಭತ್ಯೆಗಳು ಜೊತೆಗೆ ಉದ್ಯೋಗ ಭದ್ರತೆಗೆ ನೀಡುವ ಕಾನೂನುಗಳನ್ನು ಮಾಡಿ, ಅದನ್ನು ಪಾಲಿಸುವ ಖಾಸಗಿ ಕಂಪನಿಗಳಿಗೆ ಮಾತ್ರ ಲೈಸನ್ಸ ನೀಡಬೇಕು. ಇಲ್ಲದಿದ್ದಲ್ಲಿ ಅಥವಾ ಕಾನೂನು ಉಲ್ಲಂಘನೆ ಮಾಡಿದ ಖಾಸಗಿ ಕಂಪನಿಗಳ ಲೈಸನ್ಸನ್ನು ರದ್ದುಪಡಿಸಬೇಕು. ಪ್ರತಿಯೊಂದು ಹುದ್ದೆಗಳನ್ನು ಖಾಸಗಿ ಕಂಪನಿಯ ಮೂಲ ವಾಹಿನಿಯ ಮೂಲಕ ಸಂಬಳ ಹಾಗೂ ಇತರ ಭತ್ಯೆಗಳು ಸಿಗಬೇಕು. ಇಂತಹ ಹಲವಾರು ಉದ್ಯೋಗಿಗಳ ಹಿತದೃಷ್ಟಿಯನ್ನು ಇಟ್ಟುಕೊಂಡು ಹೊಸ ಕಾನೂನನ್ನು ರಚನೆ ಮಾಡಬೇಕು ಮತ್ತು ಅದನ್ನು ಜಾರಿಗೆ ತರಬೇಕು.

ಪ್ರತಿಯೊಬ್ಬರೂ ಈ ವಿಚಾರದ ಬಗ್ಗೆ ತಮ್ಮ ಸರಕಾರದ ಜನ ಸೇವಕರಿಗೆ, ರಾಜಕೀಯ ಪಕ್ಷದವರಿಗೆ ತಿಳಿಯಪಡಿಸಬೇಕು. ಖಾಸಗಿ ಕಂಪನಿಯಲ್ಲಿ ದುಡಿಯುವ ಪ್ರತಿಯೊಬ್ಬ ಉದ್ಯೋಗಿಗಳಿಗೆ ಉದ್ಯೋಗ ಸುರಕ್ಷತೆಯನ್ನು ನೀಡಲು ಈ ಹೋರಾಟ ಕೊನೆಗೆ ಸುಪ್ರೀಂಕೋರ್ಟ್ ವರೆಗೂ ಮುಟ್ಟುವ ತನಕ ಜಾರಿಯಲ್ಲಿರಬೇಕು. ಒಂದು ದಿನ ಖಂಡಿತ ನಮ್ಮ ಸರ್ಕಾರ, ಸರ್ವೋಚ್ಚ ನ್ಯಾಯಾಲಯವು ಖಾಸಗಿ ಕಂಪನಿಗಳಲ್ಲಿ ಸೇವೆಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಕೆಲಸದ ಭದ್ರತೆಗಾಗಿ ಉತ್ತಮ ಹೊಸ ಕಾನೂನಿನ ತೀರ್ಪು ನೀಡುತ್ತದೆ ಎಂಬ ಭರವಸೆ ಇದೆ.

ಈ ಲೇಖನ ನಿಮಗೆ ಇಷ್ಟ ವಾದರೆ ಖಂಡಿತವಾಗಿಯೂ ನಿಮ್ಮ ಮಿತ್ರರಿಗೆ, ಕುಟುಂಬ ಸದಸ್ಯರಿಗೆ ಶೇರ್ ಮಾಡಿ. ನಿಮ್ಮ ಅಭಿಪ್ರಾಯ ಗಳನ್ನೂ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

“ಮಸ್ತಕ ಬೆಳಗಲು ಹಂಚಿರಿ ಜ್ಞಾನದ ಜನ ಮನದ ಲೇಖನಗಳನ್ನು ಗಳಿಸಿರಿ ಪುಣ್ಯದ ಅಂಕೆಗಳನ್ನು”

LEAVE A REPLY

Please enter your comment!
Please enter your name here