ಸ್ವಂತಿಕೆ : ಮನುಷ್ಯ, ಇದ್ದಹಾಗೆ ಒಪ್ಪಿಕೊಳ್ಳುತ್ತಾನೋ ಅದೇ ಸ್ವoತಿಕೆ.

0
193
ಮನುಷ್ಯ ಯಾವಾಗ ವಸ್ತು  ಸ್ಥಿತಿಯನ್ನು ಇದ್ದದ್ದನ್ನು ಇದ್ದಹಾಗೆ ಒಪ್ಪಿಕೊಳ್ಳುತ್ತಾನೋ ಅದೇ ಸ್ವoತಿಕೆ. ಈ ಅಂಶವು ನಮ್ಮಲ್ಲಿ ಕಳೆದು ಕೊಂಡಾಗ ಅಥವಾ ಅದನ್ನು ನಾವು ಬಿಟ್ಟು ಬದುಕಿದಾಗ  ನಮಗೆ ಅರಿವಿಲ್ಲದೆಯೇ ಬದುಕು ಪರಾವಲಂಬಿಯಾಗುತ್ತದೆ.

Authenticity: Man, acceptance of the same thing is self-acceptance.

ಹಲವಾರು ಬಾರಿ ನಾವು  ನಮ್ಮಲ್ಲಿ ಇಲ್ಲದ ವ್ಯಕ್ತಿತ್ವವನ್ನು ವೈಭವೀಕರಿಸಲು ಪ್ರಯತ್ನಿಸಿದಾಗ ಆ ಅವಧಿಗೆ ನಾವು ಶ್ರೇಷ್ಠ ತೆ ಯನ್ನು ಮೆರೆಯಲು ಯಶಸ್ವಿಯಾದರೂ, ಮುಂದೆ ಸುಳ್ಳುಗಳ ಸರಮಾಲೆಗಳ ಧರಿಸಿಯೇ ಬದುಕ ಬೇಕಾಗುತ್ತದೆ.

ನಮ್ಮೊಳಗೊಬ್ಬ ಸುಳ್ಳನನ್ನು ಸದಾ  ಸಾಕಿ ಕೊಂಡಿರಬೇಕು. ಕಾರಣ, ಇಲ್ಲದುದನ್ನು ಪ್ರತಿಬಿಂಬಿಸುವ ಚಪಲ..ಇಲ್ಲಿ ಕೆಲವರನ್ನು ನಂಬಿಸಿದರೂ ಹತ್ತು ಹಲವಾರು ಕಡೆ ಪ್ರಶ್ನಾ ತೀತರಾಗುತ್ತಾರೆ. ಹಾಗಾದ್ರೆ ನನ್ನಲ್ಲಿ ಇಲ್ಲದುದನ್ನು ಉಂಟು ಮಾಡಿ ಹೇಳುವ ಈ ಕ್ರಿಯೆಗೆ ಪ್ರತಿಕ್ರಿಯೆ ಆಶ್ಚರ್ಯಜನಕವಾಗಿರ ಬಹುದು.

ನಂಬಿ ಕೆಟ್ಟವರಿಲ್ಲ ಎನ್ನುವ ದಾಸರ ಪದಕ್ಕೆ ವಿರುದ್ಧವಾಗಿ ನಂಬಿ ಕೆಟ್ಟೆವು ಎಂಬ ದೃಷ್ಠಿ ಕೋನದಿಂದಾಗಿ ವ್ಯಕ್ತಿಯ ಪ್ರತಿ ನಡವಳಿಕೆಯನ್ನು ಅನುಮಾನಾಸ್ಪದವಾಗಿ ನೋಡ ಬೇಕಾಗುತ್ತದೆ.

ಯಾವಾಗ ನಾವು ನಮ್ಮವರನ್ನು,ನಮ್ಮತನವನ್ನು ಒಪ್ಪಿ ಕೊಂಡಾಗ ಮಾತ್ರ ಸಹಜ ಜೀವನ ಸಾಧ್ಯ. ಹಲ್ಲು ಹುಳು ಬಿದ್ದಿದ್ದರೆ  ಅದನ್ನು ಎಷ್ಟೇ ಸರಿ ಪಡಿಸಿದರೂ ಹುಳುಕು ಹಲ್ಲು ಹುಳುಕೆ, ಹಾಗೇ ಬದುಕು ಕೂಡ ಎಲ್ಲವೂ ನೂರಕ್ಕೆ ನೂರು ಸರಿ ಇದೆ ಎನ್ನುವುದು ಮಿಥ್ಯ, ಇದ್ದ ಕಷ್ಟ ವನ್ನು ಎದುರಿಸಿ ಅದರಿಂದ ಹೊರಬರಲು ಪ್ರಯತ್ನ ಅಗತ್ಯ. ಅದು ಬಿಟ್ಟು  ಹಗ್ಗ  ಹೊಸೆದಂತೆ ಸುಳ್ಳುಗಳ  ಹೊಸೆಯುವಿಕೆಯ ಬದುಕು ದುರಂತದಲ್ಲಿ ಸಾಗಲು ನಾವೇ ಹೆಜ್ಜೆ ಇಟ್ಟoತೆ.

ಹಾಗಾಗಿ ಹಿರಿಯಕ್ಕನ  ಚಾಳಿ ಮನೆ ಮಂದಿಗೆಲ್ಲಾ ಗಾದೆಯಂತೆ, ಬದುಕು ಸದಾ ಸುಳ್ಳಿಗೆ ಕೈ ಕಾಲು ಜೋಡಿಸುವಲ್ಲಿ   ಸರಿಯುತ್ತೆ. ಜೀವನವೆಂಬುದು ಸುಂದರ ಪುಷ್ಪ ವಾಗಿ ಅರಳಿ  ಸುಗಂಧ ಚೆಲ್ಲಿ ಅಲ್ಲಿ ಅರಳುವ ಹೂ  ಕೊನೆಗೆ ಬಾಡಿ  ಧರೆಗುರುಳಿದರೂ, ಇದ್ದಷ್ಟೂ ಕಾಲ ಸಾರ್ಥಕತೆ  ಪಡೆಯಲಿ. ಕೃತಕ ಹೂವಿನ ಸೌಂದರ್ಯ ಅಲ್ಪ ದಿನದ ಸೆಳೆತ ತಾನೇ?

ಕೊರೋನ ಎಂಬ ಮಹಾಮಾರಿ ಬಂದ ಮೊದಲಲ್ಲಿ ಇದ್ದ ಕೊತ ಕೊತ  ಇಳಿಮುಖವಾಗಿದೆ, ಕೆಲವರ ಬದುಕು ಮೂರಾಬಟ್ಟೆಯಾದ್ರೆ ಕೆಲವರಿಗೆ ದಾರಿದೀಪವೂ ಆಗಿದೆ.ಎಲ್ಲಿ ಮನದ ಸ್ವೀಕಾರವಿದೆಯೋ ಅಲ್ಲಿ  ಹೊಂದಾಣಿಕೆ ಹಾಗೂ ಬದುಕಿನ ಉನ್ನತಿ  ತಾನೇ  ತಾನಗಿ ನಡೆದು ಹೋಗುತ್ತದೆ.

ಉಟ್ಟ ಬಟ್ಟೆ, ಆಡುವ ಮಾತುಗಳು ,ಕೊನೆಗೆ ಬರೆವ ಸಾಹಿತ್ಯ ಕೂಡ ಎರವಲು ಆಗಬಾರದು. ಅಲ್ಲಿ ಪಡೆವ  ಹಿಗ್ಗು , ಕುಗ್ಗುಗಳು ನಮ್ಮದೇ ಆಗಿದ್ದರೆ ಅಲ್ಲೂ ಒಂದು ಹಿರಿಮೆ, ಗರಿಮೆಗಳಿವೆ.  ಎಲ್ಲ ಪಕ್ಷಿಗಳು ಸಮಾನವಾಗಿರದೆ ಪ್ರತಿ ಪಕ್ಷಿ, ಪ್ರಾಣಿಗಳಲ್ಲಿ ತನ್ನದೇ ಆದ ನಾಟ್ಯ,ಬಣ್ಣ, ಬೆರಗು, ಬಿನ್ನಾಣಗಳ ಸೌಂದರ್ಯ ವಿರುತ್ತದೆ.
ತಾನೇ, ಎಲ್ಲ ಕಾಲದಲ್ಲೂ ಎಲ್ಲರನ್ನೂ ತಲುಪಲು ಕಷ್ಟ, ಕನಿಷ್ಠ ಪಕ್ಷ ನಮ್ಮನ್ನು ನಾವೇ   (ನಮ್ಮಆತ್ಮವನ್ನು) ತಲುಪ ಬೇಕೆಂಬ  ಹಂಬಲವಿರ ಬೇಕು. ವಿಡಂಭನಾತ್ಮಕ ಬದುಕು ಸಿರಿವಂತಿಕೆಯ ಮೆಟ್ಟಿಲೇರಿದ್ದರೂ ಆತ್ಮೋನ್ನತಿ  ಕೆಳಮುಖವಾಗುತ್ತಾ ಹೋಗುತ್ತದೆ.

ಮನುಷ್ಯನಿಗೆ ರೋಗ ಬಂದಾಗ , ಈ ನೋವು ನಾಳೆ ಮಾಗುತ್ತೆ ಎಂಬ ಭರವಸೆಯಲ್ಲಿ ಅದನ್ನ ಕಡೆಗಣಿಸಿ ನಗುತ್ತಾ ಇರಲು ಸಾದ್ಯ, ಅದೇ  ಮನಕ್ಕೆ ಗಾಯವಾದಾಗ  ಆ ನೋವು  ಮಡುಗಟ್ಟಿದ ಪಾಚಿಯಾಗಿ, ಆತ್ಮ ವಿಶ್ವಾಸ ಕುಗ್ಗಿ ಅನಾಯಾಸವಾಗಿ ಜೀವನ ಪ್ರೀತಿ ಮಾಯವಾಗುತ್ತೆ.

ಆಗ  ಇರಲಿ,ಆಗುವುದೆಲ್ಲ  ಒಳ್ಳೆಯದಕ್ಕೆ, ನಿಂದಕರು ಇರಬೇಕು ಜಗದಲಿ ಎನ್ನುತ್ತಾ  ಯಾರಿಂದಲೂ ಹೆಚ್ಚಿನ ಅಪೇಕ್ಷೆ ಸಲ್ಲದೆಂದು,ಉಪೇಕ್ಷೆ ಮಾಡಿದ ಕೂಡಲೇ ಮುದಗೊಂಡ ಮನ ಹಗುರವಾಗಿ , ನೋವ ಮರೆತು ಕನಸುಗಳ  ಜೋಡಿಸಿ ಗೆಲುವಿನತ್ತ  ಮತ್ತೆ ಧಾವಿಸುತ್ತೆ. ತನಗೆ ತಾನೇ ಮದ್ದು ಹಚ್ಚುವ  ಈ ಪ್ರಕ್ರಿಯೆ ನಾವು ನಮ್ಮ ಗುಣ- ಅವಗುಣಗಳನ್ನು

ಸ್ವೀಕರಿಸಿದಾಗ ಮಾತ್ರ ಸಾಧ್ಯ.

ಹಾಗಾಗಿ ತಪ್ಪು- ಒಪ್ಪುಗಳು ಸರ್ವೆ ಸಾಮಾನ್ಯವಾದಾಗ ಒಪ್ಪಿಕೊಂಡು ,ತಿದ್ದಿ ಅದರೊಂದಿಗೆ ಹೊಂದಿಕೊಂಡು ಬದುಕುವ ಛಾತಿಯೇ ಸ್ವೀಕಾರ. ಇಲ್ಲಿ ನೋವಾದರೂ ನಮಗೆ ನಾವೇ ಸಮಾಧಾನ ಗೊಳಿಸುತ್ತಾ, ಇತರರಿಗೂ ಸ್ವಾಂತನ ನೀಡುವ ಧ್ವನಿಯಾಗುತ್ತೇವೆ. ಇಲ್ಲಿ ಸೋಲಿನ ಬಿಂಬ ಮಾಯವಾಗಿ ಹೊಸ ಚೈತನ್ಯ ಚಿಗುರುತ್ತದೆ. ಅದನ್ನ ಬಿಟ್ಟು  ಬರೀ ಊಹಾ ಪೋಹಾಗಳ ಕನಸಿನ  ಮನೆ  ಕಟ್ಟುವುದು ಮರಳುತನ.

ಬದುಕಿಗೆ ಬೇಕಿರುವುದು ನಮ್ಮವರ ಪ್ರೀತಿ ಹಾಗೂ ನಮ್ಮವರ ಸುರಕ್ಷಿತ ವಲಯವಿದ್ದರೆ  ಜೀವನ ನಿರ್ವ ಹಣೆ ಸುಲಲಿತ. ಇಲ್ಲಿ ಮುಖವಾಡಗಳು  ಅಪ್ರಸ್ತುತ . ಕಾರಣ ಮುಖವಾಡ ಕಳಚಿ ಬಿದ್ದಾಗ ಆಘಾತ ನಿಶ್ಚಿತ.

ವೈಯಕ್ತಿಕ ಸಿರಿವಂತಿಕೆಯಿಂದ ಇದೆಲ್ಲ ಶಾಶ್ವತ ಎಂದು ಮೆರೆವ ವ್ಯಕ್ತಿಯ ಆಚಾರ ವಿಚಾರಗಳು ಟೊಳ್ಳು ಆಗಿದ್ದರೆ   ಆತನ  ವ್ಯಕ್ತಿತ್ವ ಜೊಳ್ಳು ಕಾಳುಗಳಿಗೆ ಸಮ. ವಾಸ್ತವ ಅಂಶಗಳನ್ನ ಸ್ವೀಕರಿಸಿದಾಗ ಮಾತ್ರ ಬದುಕುವ ಕಲೆ,  ನಮ್ಮಲ್ಲಿನ ಹುಚ್ಚುತನಗಳಿಗೆ ಕಡಿವಾಣವಿಕ್ಕುತ್ತೆ.

ಹಾಗೆಂದು ಸರ್ವವೂ ಪಾರದರ್ಶಕವಾಗಿರಬೇಕು, ಅಥವಾ ಎಲ್ಲ ಕಾಲಕ್ಕೂ ನೀರ ಮೇಲಿನ ಗುಳ್ಳೆಯಂತೆ ಇರಬೇಕು ಎನ್ನುವುದು ಸಮಂಜಸವಲ್ಲ. ಇತರರು  ಅಂದ್ರೆ ನಮ್ಮವರು ಅಂದು ಕೊಂಡವರು ನಮ್ಮ ರೀತಿ – ನೀತಿಗಳ ಸಂಶಯಿಸದೆ ಸಾಮಾನ್ಯ ಬದುಕಿನ ಮೌಲ್ಯ ಗಳು ಕುಸಿಯದಂತೆ  ನಮ್ಮಬದುಕು ಸಮಾಧಾನದ  ಸೋಪಾನವೆರೆಲು ಸ್ವತಿಂಕೆ ಅತೀ ಅಗತ್ಯವೂ ,  ಅನಿವಾರ್ಯವೂ ಹೌದು.

ಹಾಗಾಗಿ ಇಲ್ಲಿರುವ ಅರು ದಿನದ ಬದುಕಿನ ಪಥದಲ್ಲಿ ಸ್ವoತಿಕೆಯ ಬದುಕಿನ ಆಯ್ಕೆ ನಮ್ಮದಾಗಿರಲಿ. ಬೆಸೆದ ಭಾವಗಳ ಸಂಬಂಧಗಳು ಹಿತವಾಗಿರಲಿ.  ದಾರ ಕಡಿದ ಗಾಳಿಪಟದ ಹಾರಾಟ ಕ್ಷಣಿಕ, ಸಿಕ್ಕುಗಳಲ್ಲಿ ಸಿಕ್ಕ ಗೋಜಲಿನ  ಕೂದಲ ಗುಚ್ಛವಾಗದೆ  ಸ್ವಚಂದವಾಗಲಿ. ಬದುಕು ಕೇವಲ ಅಂತಸ್ತುಗಳ  ಕಾಯ್ದಿರಿಸುವ ಸವಕಲು ನಾಣ್ಯವಾಗದಿರಲಿ.

ಲೇಖನ : ಸುಜಾತ ಉಮೇಶ್ ಶೆಟ್ಟಿ

 

LEAVE A REPLY

Please enter your comment!
Please enter your name here